ಶೂದ್ರಕ
	ಸು. 400. ಸಂಸ್ಕøತದ ಪ್ರಸಿದ್ಧ ನಾಟಕಕಾರ. ಮೃಚ್ಛಕಟಿಕ ಎಂಬ ನಾಟಕದ ಕರ್ತೃ. ಇವನ ಕಾಲ, ದೇಶ, ಹೆಸರುಗಳ ವಿಚಾರದಲ್ಲಿ ಸಾಕಷ್ಟು ಚರ್ಚೆಗಳಿವೆ. ಇವನ ನಾಟಕದ ಪ್ರಸ್ತಾವನೆಯಿಂದ ತಿಳಿದುಬರುವ ವಿಚಾರಗಳೆಂದರೆ ಇವನು ಒಬ್ಬ ರಾಜ, ಸುಂದರನೂ ಸತ್ವಶಾಲಿಯೂ ಕವಿಯೂ ಆಗಿದ್ದನೆಂಬುದು. ಇವನ ಹೆಸರಿನಲ್ಲಿ ಲಭ್ಯವಿರುವ ಏಕೈಕ ಕೃತಿ ಮೃಚ್ಛಕಟಿಕ. ಉಜ್ಜಯನಿಯ ವರ್ತಕನಾದ ಚಾರುದತ್ತನ ಕಥೆಯನ್ನು ಇದು ಒಳಗೊಂಡಿದೆ. ಭಾಸನ ಚಾರುದತ್ತ ನಾಟಕವೇ ಇದಕ್ಕೆ ಆಧಾರ ಎಂಬ ಅಭಿಪ್ರಾಯವಿದೆ. 

	ಮೃಚ್ಛಕಟಿಕ 10 ಅಂಕಗಳ ಒಂದು ಪ್ರಕರಣ. ಈ ಅಂಕಗಳಿಗೆ ಕ್ರಮವಾಗಿ ಅಲಂಕಾರನ್ಯಾಸ, ದ್ಯೂತಕರ ಸಂವಾಹಕ, ಸಂಧಿಚ್ಛೇದ ಮದನಿಕಾಶರ್ವಿಲಕ, ದುರ್ದಿನ, ಪ್ರವಹಣ ವಿಪರ್ಯಯಾ ಆರ್ಯಕಾಪ ವಾಹನ, ವಸಂತಸೇನಾಮೋಚನ, ವ್ಯವಹಾರ, ಸಂಹಾರಗಳೆಂಬ ಹೆಸರುಗಳನ್ನು ನೀಡಲಾಗಿದೆ. 

	ಸ್ನೇಹ, ಅನುಕಂಪಾದಿ ಭಾವಗಳನ್ನು ಕೆರಳಿಸಿ, ಕರುಳು ಹಿಂಡುವ ಸನ್ನಿವೇಶಗಳ ಜೋಡಣೆಗಳಿಂದ ಈ ನಾಟಕಕ್ಕೆ ಮೃಚ್ಛಕಟಿಕ ಎಂಬ ಹೆಸರು ಅನ್ವರ್ಥವಾಗಿದೆ. ನಾಯಕ ಚಾರುದತ್ತ ಜಾತಿಯಲ್ಲಿ ಬ್ರಾಹ್ಮಣ, ವೃತ್ತಿಯಲ್ಲಿ ವರ್ತಕ, ದಾನಧರ್ಮಾದಿಗಳಲ್ಲಿ ಕ್ಷತ್ರಿಯ, ದೀನರಿಗೆ ಕಲ್ಪವೃಕ್ಷ, ಸಜ್ಜನರ ಕುಟುಂಬಿ, ಶಿಕ್ಷಿತರಿಗೆ ಆದರ್ಶ, ಸುಚರಿತ ನಿಕಷ ಇತ್ಯಾದಿ ಸಕಲ ಗುಣ ಸಂಪನ್ನನಾಗಿದ್ದು ಸಿರಿತನದಿಂದ ಬಡತನಕ್ಕೆ ಜಾರಿ, ಸುಳ್ಳು ಆಪಾದನೆಗೆ ಸಿಲುಕಿ, ಮಿತ್ರರಿಂದ ದೂರನಾಗಿ ದುಃಖಿತನಾಗುತ್ತಾನೆ. ನಾಟಕದ ಅಂತ್ಯದಲ್ಲಿ ಇವನ ಸತ್ಯಕ್ಕೇ ಜಯ ಲಭಿಸುತ್ತದೆ. 

	ಈ ಕೃತಿಯ ವಸ್ತುವಿನಲ್ಲಿ 2 ಪ್ರಧಾನ ಭಾಗಗಳಿವೆ. ಚಾರುದತ್ತ ಮತ್ತು ವಸಂತ ಸೇನೆಯರ ಪ್ರಣಯ ಸಂಬಂಧದಿಂದ ಬೆಳೆದ ಸಾಮಾಜಿಕ ವೃತ್ತಾಂತ ಒಂದಾದರೆ ಮತ್ತೊಂದು ಆರ್ಯಕ ಮತ್ತು ಪಾಲಕರಿಗೆ ಸಂಬಂಧಿಸಿದ ರಾಜಕೀಯ ವೃತ್ತಾಂತ. ಶರ್ಮಿಳಕ ಮತ್ತು ಮದನಿಕೆಯರ ಪ್ರಣಯ ವೃತ್ತಾಂತ ಈ ಎರಡೂ ವೃತ್ತಾಂಗಳಿಗೆ ಬೆಸುಗೆಯಂತಿದೆ. 

	ಸುಮಾರು ಮೂವತ್ತು ಪಾತ್ರಗಳು ಕಾಣಿಸಿಕೊಂಡರೂ ಕಥೆಗೆ ಅವು ಹೊರೆಯಾಗದೆ ಕಥೆಯ ಸ್ವಾರಸ್ಯವನ್ನು ಹೆಚ್ಚಿಸಿವೆ. ಕಥೆಯ ಪ್ರತಿಯೊಂದು ಘಟನೆಯೂ ಕವಿಯ ಆಶಯವನ್ನು ಸಮರ್ಥಿಸುವಂತಿವೆ. 

	ಇದು ಮೂಲತಃ ಶೃಂಗಾರ ಪ್ರಧಾನ ನಾಟಕವಾಗಿದ್ದರೂ ಯಥೇಚ್ಛವಾಗಿ ಹಾಸ್ಯವೂ ಇದೆ. ವಿದೂಷಕ, ಶಕಾರ ಮೊದಲಾದ ಪಾತ್ರಗಳ ನಡೆ, ನುಡಿ, ವೇಷ ಭೂಷಣಾದಿಗಳಿಂದ ಹಾಸ್ಯವನ್ನು ಪ್ರತಿಪಾದಿಸಲಾಗಿದೆ. ಈ ನಾಟಕದ ಹಾಸ್ಯ ಪ್ರಮಾಣ ಮಿಕ್ಕೆಲ್ಲ ಸಂಸ್ಕøತ ನಾಟಕಗಳಿಗಿಂತ ಹೆಚ್ಚು. ವೈವಿಧ್ಯ ಹಾಗೂ ಸರ್ವತೋಮುಖತೆ ಇಲ್ಲಿನ ಹಾಸ್ಯದ ವೈಶಿಷ್ಟ್ಯ. ಈ ಬಗೆಯ ಹಾಸ್ಯಪ್ರತಿಪಾದನೆಯಿಂದ ಪ್ರಸಿದ್ಧ ಪಾಶ್ಚಾತ್ಯ ಹಾಸ್ಯಗ್ರಂಥಗಳನ್ನು ಇದು ಸರಿದೂಗಬಲ್ಲದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. 

	ಬೇರೆ ಯಾವ ನಾಟಕಗಳಲ್ಲೂ ಕಾಣಸಿಗದಷ್ಟು ಪ್ರಾಕೃತದ ಬಳಕೆ ಈ ನಾಟಕದಲ್ಲಿದೆ. ಅದು ಪಾತ್ರೋಚಿತವಾಗಿ ಬಳಕೆಗೊಂಡಿರುವುದು ಇದರ ವೈಶಿಷ್ಟ್ಯ. ಸಂಭಾಷಣೆಯ ಓಟಕ್ಕೆ ಸಹಾಯಕವಾಗುವಂತೆ ಶ್ಲೋಕ ಛಂದಸ್ಸನ್ನೂ ಪ್ರಾಕೃತ ಛಂದಸ್ಸನ್ನೂ ಬಳಸಿಕೊಳ್ಳಲಾಗಿದೆ. 

	ಈ ನಾಟಕವನ್ನು ಹಲವು ವಿದ್ವಾಂಸರು ಕನ್ನಡಕ್ಕೂ ಅನುವಾದಿಸಿದ್ದಾರೆ, ರೂಪಾಂತರಗೊಳಿಸಿದ್ದಾರೆ. ಇವುಗಳಲ್ಲಿ ಕೆ.ವಿ. ಸುಬ್ಬಣ್ಣ ಅವರ ಕನ್ನಡ ರೂಪಾಂತರ ಮಣ್ಣಿನ ಬಂಡಿ ಗಮನಾರ್ಹವಾಗಿದೆ.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

				*